News and EventsDaily Storiesದಿನಕ್ಕೊಂದು ಕಥೆ: ಹೇಳಿದ್ದು ಕೇಳುವುದಿಲ್ಲ, ಆದರೆ ಮಾಡಿದ್ದನ್ನು ಮಾಡುತ್ತಾರೆ.

Ⓒ By, Nekarbandhu

ದಿನಕ್ಕೊಂದು ಕಥೆ: ಹೇಳಿದ್ದು ಕೇಳುವುದಿಲ್ಲ, ಆದರೆ ಮಾಡಿದ್ದನ್ನು ಮಾಡುತ್ತಾರೆ.

ನಮ್ಮ ಮಕ್ಕಳು ನಾವು ಹೇಳಿದ್ದನ್ನು ಕೇಳುವುದಿಲ್ಲ, ಅದರಂತೆ ನಡೆಯುವುದಿಲ್ಲ ಎಂದು ದೂರುವ ತಾಯ್ತಂದೆಯರು ನಾವಾದರೆ, ನಾವು ಓದಲೇಬೇಕಾದ ಪ್ರಸಂಗವೊಂದು ಇಲ್ಲಿದೆ.  ಒಮ್ಮೆ ಸ್ವಾಮಿ ಏಕನಾಥ್ ಈಶ್ವರನ್ ಅವರನ್ನು ಭಾರತೀಯ ಗೃಹಸ್ಥರೊಬ್ಬರು ಭೇಟಿಯಾಗಿ ತಮ್ಮ ಸಮಸ್ಯೆಯೊಂದನ್ನು ಹೇಳಿಕೊಂಡರು. ‘ನನಗೆ ಒಬ್ಬನೇ ಮಗ. ಈಗವನಿಗೆ ಹನ್ನೆರಡು ವರ್ಷ ವಯಸ್ಸು. ಅವನು ಆಗಾಗ ಕದ್ದು ಮುಚ್ಚಿ ಸಿಗರೇಟು ಸೇದುವುದನ್ನು ಗಮನಿಸಿದ್ದೇನೆ. ಇಷ್ಟು ಚಿಕ್ಕ ವಯಸ್ಸಿಗೇ ಈ ದುರಭ್ಯಾಸವನ್ನು ಅವನು ಬೆಳೆಸಿಕೊಂಡರೆ ಮುಂದೇನಾಗುತ್ತದೋ ಎಂಬ ಸಮಸ್ಯೆ ನನ್ನನ್ನು ಕಾಡುತ್ತಿದೆ. ನನಗೇನಾದರೂ ಒಂದು ಪರಿಹಾರ ಸೂಚಿಸಿ’ ಎಂದು ಕೇಳಿಕೊಂಡರು.

ಸ್ವಾಮೀಜಿಯವರು ಅವರನ್ನೊಮ್ಮೆ ದಿಟ್ಟಿಸಿ ನೋಡಿ ‘ನಿಮ್ಮನ್ನು ನೋಡಿದರೆ ನೀವು ಕೇರಳದಿಂದ ಬಂದವರಂತೆ ಕಾಣುತ್ತೀರಿ. ನಾನು ಅಲ್ಲಿ ಕೇಳಿದ್ದ ಕತೆಯೊಂದನ್ನು ನಿಮಗೆ ಹೇಳುತ್ತೇನೆ. ಒಬ್ಬ ಜಮೀನುದಾರರ ಬಳಿ ಒಂದು ಮೈನಾ ಹಕ್ಕಿ ಇತ್ತು. ಅದು ಅವರ ಮುದ್ದಿನ ಹಕ್ಕಿ. ಒಮ್ಮೆ ಇದ್ದಕ್ಕಿದ್ದಂತೆ ಅದು ಕೆಮ್ಮಲಾರಂಭಿಸಿತು. ಕೆಮ್ಮು ಎರಡು ಮೂರು ದಿನಗಳಾದರೂ ನಿಲ್ಲದಿದ್ದಾಗ ಜಮೀನುದಾರರು ಊರಿನ ವೈದ್ಯರ ಬಳಿಗೆ ಹಕ್ಕಿಯನ್ನು ಕೊಂಡೊಯ್ದರು. ವೈದ್ಯರು ಮೈನಾ ಹಕ್ಕಿಯನ್ನು ಪರೀಕ್ಷಿಸಿದರು. ಜಮೀನುದಾರರ ಕೈಯಲ್ಲಿ ಜೇನುತುಪ್ಪದಲ್ಲಿ ಕಲೆಸಿದ ಔಷಧ ಕೊಟ್ಟು ಅದನ್ನು ಹಕ್ಕಿಗೆ ಮೂರು ದಿನಗಳ ಕಾಲ ತಿನ್ನಿಸಲು ಹೇಳಿ ಕಳುಹಿಸಿದರು.
ಮೂರು ದಿನಗಳ ನಂತರ ಜಮೀನುದಾರರು ಮತ್ತೆ ವೈದ್ಯರ ಬಳಿಗೆ ಬಂದು ಹಕ್ಕಿಯ ಕೆಮ್ಮುವಿಕೆ ನಿಂತಿಲ್ಲವೆಂದು ಹೇಳಿದರು. ವೈದ್ಯರು ಮತ್ತೊಮ್ಮೆ ಸುದೀರ್ಘವಾಗಿ ಹಕ್ಕಿಯನ್ನು ಪರೀಕ್ಷಿಸಿದರು. ಆನಂತರ ಅವರಿಗೆ ಏನನಿಸಿತೋ ಏನೋ? ಅವರು ಜಮೀನುದಾರರನ್ನು ‘ನೀವು ಸ್ವಲ್ಪ ಕೆಮ್ಮುತ್ತೀರಾ? ನಾನದನ್ನು ನೋಡಬೇಕು’ ಎಂದರು. ವೈದ್ಯರದ್ದು ಇದೆಂಥ ವಿಚಿತ್ರ ಬೇಡಿಕೆ ಎಂದುಕೊಳ್ಳುತ್ತಾ ಜಮೀನುದಾರರು ಒಂದೆರಡು ಬಾರಿ ಕೆಮ್ಮಿದರು. ಆಶ್ಚರ್ಯವೆಂದರೆ ಜಮೀನುದಾರರ ಕೆಮ್ಮು ಮೈನಾ ಹಕ್ಕಿಯ ಕೆಮ್ಮಿನಂತೆಯೇ ಇತ್ತು. ವೈದ್ಯರು ಗಟ್ಟಿಯಾಗಿ ನಕ್ಕು ಮತ್ತೊಂದು ಬಗೆಯ ಲೇಹವನ್ನು ಜಮೀನುದಾರರಿಗೆ ಕೊಟ್ಟು ‘ಈ ಲೇಹ್ಯ ನಿಮಗೆ! ನೀವಿದನ್ನು ಮೂರು ದಿನ ಸೇವಿಸಿ’ ಎಂದರು.

ಜಮೀನುದಾರರು ಆಶ್ಚರ್ಯದಿಂದ ‘ನಾನು ತಮ್ಮ ಬಳಿ ಬಂದಿರುವುದು ನನ್ನ ಮೈನಾ ಹಕ್ಕಿಯ ಕೆಮ್ಮಿಗಾಗಿ. ಆದರೆ ನೀವು ನನಗೆ ಔಷಧ ಕೊಡುತ್ತಿದ್ದೀರಲ್ಲಾ?’ ಎಂದರು. ವೈದ್ಯರು ‘ಜಮೀನುದಾರರೇ! ನಿಮಗೂ ಕೆಮ್ಮಿದೆ. ನೀವು ಕೆಮ್ಮುತ್ತಿದ್ದೀರಿ. ನಿಮ್ಮ ಮುದ್ದಿನ ಮೈನಾ ಹಕ್ಕಿ ನಿಮ್ಮನ್ನು ಅನುಕರಿಸುತ್ತಿದೆ. ನೀವು ಕೆಮ್ಮುವುದನ್ನು ನಿಲ್ಲಿಸುವವರೆಗೆ ಅದೂ ಕೆಮ್ಮುವುದನ್ನು ನಿಲ್ಲಿಸುವುದಿಲ್ಲ’ ಎಂದು ಹೇಳಿದರಂತೆ. ಜಮೀನುದಾರರೂ ಮತ್ತು ಮೈನಾ ಹಕ್ಕಿ ಇಬ್ಬರೂ ಔಷಧ ತೆಗೆದುಕೊಂಡರಂತೆ. ಒಂದೆರಡು ದಿನಗಳಲ್ಲಿ ಇಬ್ಬರ ಕೆಮ್ಮೂ ನಿಂತುಹೋಯಿತಂತೆ’!

ಈ ಕತೆ ಹೇಳಿದ ನಂತರ ಸ್ವಾಮೀಜಿಯವರು ಗೃಹಸ್ಥರನ್ನು ‘ನೀವು ಸಿಗರೇಟು ಸೇದುತ್ತೀರಾ?’ ಎಂದು ಕೇಳಿದರಂತೆ. ಗೃಹಸ್ಥರು ಹೌದೆಂದು ತಲೆಯಾಡಿಸಿದಾಗ, ಸ್ವಾಮೀಜಿಯವರು ‘ನಿಮ್ಮ ಮಗ ಸಿಗರೇಟು ಸೇದುವುದನ್ನು ನಿಲ್ಲಿಸಬೇಕೆಂಬುದು ನಿಮ್ಮ ಬಯಕೆಯಾದರೆ, ನೀವೂ ಅದನ್ನು ನಿಲ್ಲಿಸಬೇಕು’ ಎಂದು ಹೇಳಿ ಕಳುಹಿಸಿದರಂತೆ. ನಮ್ಮ ಮಕ್ಕಳು ಬಹಳ ಟಿವಿ ನೋಡುತ್ತಾರೆ ಎಂಬುದು ನಮ್ಮ ದೂರಾದರೆ, ನಾವು ಎಷ್ಟು ಹೊತ್ತು ಟಿವಿ ನೋಡುತ್ತೇವೆಂಬುದನ್ನು ಲೆಕ್ಕ ಹಾಕಬಹುದು.

ಮಕ್ಕಳು ಬಹಳ ಸುಳ್ಳು ಹೇಳುತ್ತಾರೆ ಎಂಬುದು ನಮ್ಮ ದೂರಾದರೆ, ನಾವು ಮಕ್ಕಳ ಮುಂದೆ ಸತ್ಯವನ್ನೇ ಹೇಳುತ್ತೇವೆಯೇ ಎಂಬುದನ್ನು ಚಿಂತಿಸಬಹುದು. ಮಕ್ಕಳು ಒಳ್ಳೆಯ ಪುಸ್ತಕಗಳನ್ನು ಓದುವುದಿಲ್ಲ ಎಂದು ದೂರುವ ತಾಯ್ತಂದೆಯರು ತಾವು ಓದುವ ಪುಸ್ತಕಗಳನ್ನೂ, ಮ್ಯಾಗಜಿನ್‌ಗಳನ್ನು ಒಮ್ಮೆ ನೋಡಿಕೊಳ್ಳಬಹುದು. ಸ್ವಾಮಿ ಏಕನಾಥ ಈಶ್ವರನ್ ಅವರು ಹೇಳಿದ ಕತೆ ನಮ್ಮೆಲ್ಲರಿಗೂ ಮಾರ್ಗದರ್ಶಿಯಲ್ಲವೇ? ನಮ್ಮ ಮಕ್ಕಳೂ ನಾವು ಹೇಳಿದ್ದನ್ನು ಕೇಳದೆ ಇರಬಹುದು! ಆದರೆ ನಾವು ಮಾಡಿದ್ದುದನ್ನು ಖಂಡಿತವಾಗಿಯೂ ಅನುಕರಿಸುತ್ತಾರಲ್ಲವೇ? ಏಕೆಂದರೆ ಅವರು ನಮ್ಮ ಮಕ್ಕಳಲ್ಲವೇ?

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

News & Events

Bride and Grooms

Looking for Bride or Groom?

- Please Call us @ 6362030905 for any queries -