ಶಿಷ್ಯನೊಬ್ಬ ತನ್ನ ಗುರುವಿನ ಬಳಿ ಹೋಗಿ “ಗುರುಗಳೆ ನನಗೆ ಸಾವಿನ ಬಗ್ಗೆ ಭಯ ಶುರುವಾಗಿದೆ. ನಾನು ಒಂದು ದಿನ ಸತ್ತು ಹೋಗುತ್ತೇನೆ ಎಂದು ನೆನಪಿಸಿಕೊಂಡಾಗಲೆಲ್ಲ ಚಿಂತೆ ಕಾಡುತ್ತದೆ. ಇದಕ್ಕೇನು ಮಾಡುವುದು?” ಎಂದು ಕೇಳಿದ.
ಗುರುವಿಗೆ ಅವನ ಭಯ, ಆತಂಕ ನೋಡಿ ನಗು ನಕ್ಕು, “ನೋಡು ನೀನು ನನ್ನಿಂದ ಒಂದು ಸಾವಿರ ನಾಣ್ಯಗಳನ್ನು ಸಾಲವಾಗಿ ತೆಗೆದುಕೊಂಡಿದ್ದೀಯ ಎಂದಿಟ್ಟುಕೊಳ್ಳೋಣ. ಸ್ವಲ್ಪ ದಿನಗಳ ನಂತರ ಆ ಹಣವನ್ನು ನನಗೆ ವಾಪಸ್ ಮಾಡಬೇಕೆಂದು ನಿನಗೆ ಭಯವಾಗಲಿ, ಚಿಂತೆಯಾಗಲಿ ಆಗುತ್ತದೆಯೇ?” ಎಂದು ಪ್ರಶ್ನಿಸಿದರು.
“ಇಲ್ಲ ನನಗೇಕೆ ಭಯವಾಗಬೇಕು? ಇವತ್ತಲ್ಲ, ನಾಳೆ ನಾನದನ್ನು ವಾಪಸ್ ಮಾಡಲೇಬೇಕು ತಾನೆ?” ಎಂದ ಶಿಷ್ಯ. ಆದರೆ ಗುರುಗಳೇಕೆ ಹಾಗೆ ಕೇಳಿದರೆಂದು ಅರ್ಥವಾಗಲಿಲ್ಲ. “ಗುರೂಜಿ.. ಇದಕ್ಕೂ ನನ್ನ ಭಯಕ್ಕೂ ಏನು ಸಂಬಂಧ?” ಎಂದು ಆಶ್ಚರ್ಯದಿಂದ ಕೇಳಿದ. ಆಗ ಗುರುಗಳು ಕೆಳಕ್ಕೆ ಬಾಗಿ ಒಂದು ಮುಷ್ಟಿ ಮಣ್ಣನ್ನು ಕೈಯಲ್ಲಿ ತೆಗೆದುಕೊಂಡು “ನಾನು, ನೀನು ಈ ಮಣ್ಣಿನಿಂದಲೇ ಬಂದವರು. ಈ ದೇಹ ನಿನ್ನದಲ್ಲ. ನೀನದನ್ನು ಸಾಲವಾಗಿ ಪಡೆದುಕೊಂಡಿದ್ದೀಯ. ಕೊನೆಗೊಂದು ದಿನ ನೀನದನ್ನು ಬಿಟ್ಟು ಹೊರಡಲೇಬೇಕು. ನೀನು ಪ್ರತಿ ಬಾರಿ ಹನಿ ನೀರು ಕುಡಿದಾಗಲೂ, ತುತ್ತು ಅನ್ನ ಸೇವಿಸಿದಾಗಲೂ ನಿನ್ನ ಸಾಲದ ಹೊರೆ ಜಾಸ್ತಿಯಾಗುತ್ತಲೇ ಹೋಗುತ್ತದೆ!”
ಅಷ್ಟು ಹೇಳಿ ತಮ್ಮ ಕೈಯಲ್ಲಿದ್ದ ಮಣ್ಣನ್ನು ಗಾಳಿಯಲ್ಲಿ ತೂರಿದರು. ಮಣ್ಣಿನ ಕಣಗಳು ನಿಧಾನವಾಗಿ ಹಾರಿ ಮತ್ತೆ ಭೂಮಿ ಸೇರಿದವು. “ನೀನೆಷ್ಟೇ ಎತ್ತರವಾಗಿ ಬೆಳೆದರೂ, ವಿಮಾನದಲ್ಲೇ ಓಡಾಡಿದರೂ ಒಂದಲ್ಲ ಒಂದು ದಿನ ನೀನು ಕೆಳಗೆ ಬರಲೇಬೇಕು, ಮಣ್ಣನ್ನು ಸೇರಲೇಬೇಕು. ನೀನು ಮಾಡಿದ ಎಲ್ಲ ಸಾಲಕ್ಕೆ ಪ್ರತಿಯಾಗಿ ನಿನ್ನ ದೇಹ ಮಣ್ಣಾಗುತ್ತದೆ. ಈಗ ತಿಳಿಯಿತಲ್ಲ ನಿನ್ನ ಭಯಕ್ಕೆ ಕಾರಣವೇನೆಂದು? ನೀನು ನಿನ್ನನ್ನು ಈ ದೇಹದ ಮಾಲೀಕನೆಂದು ತಪ್ಪು ತಿಳಿದಿದ್ದೀಯ. ಆದರೆ ಸತ್ಯವೇ ಬೇರೆ. ನೀನು ಕೇವಲ ಬಾಡಿಗೆದಾರನಷ್ಟೇ. ಯಾವತ್ತು ನಿನ್ನ ಬಾಡಿಗೆಯ ಅವಧಿ ಮುಗಿಯುತ್ತದೋ, ನೀನ್ಯಾವತ್ತು ಮಣ್ಣಾಗುತ್ತೀಯೋ ಯಾರಿಗೆ ಗೊತ್ತು? ನೀನು ಆ ಬಗ್ಗೆ ಚಿಂತಿಸಿದರೆ, ಮರುಗಿದರೆ, ಭಯಪಟ್ಟರೆ ಏನು ಪ್ರಯೋಜನ?” ಎಂದು ಕೇಳಿದರು.
ಬದುಕು ಎಷ್ಟು ವಿಶಾಲವಾಗಿದೆಯೋ ಅಷ್ಟೇ ಸಂಕ್ಷಿಪ್ತವೂ ಆಗಿದೆ. ಹುಟ್ಟು-ಸಾವುಗಳೆಂಬುದು ನಾಣ್ಯದ ಎರಡು ಮುಖಗಳಿದ್ದಂತೆ, ಹಗಲು ಕಳೆದಾದ ಮೇಲೆ ಬರುವ ರಾತ್ರಿಯಿದ್ದಂತೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಸಾವಿನ ಬಗ್ಗೆ ಭಯ ಪಡುವುದು ವ್ಯರ್ಥ. ಬದುಕನ್ನು ಬಹಳ ಗಂಭೀರವಾಗಿ ಪರಿಗಣಿಸಬಾರದು. ಏಕೆಂದರೆ ಕೊನೆಯಲ್ಲಿ ಯಾರೂ ಇಲ್ಲಿಂದ ಜೀವಂತವಾಗಿ ವಾಪಸ್ ಹೋಗುವುದಿಲ್ಲ.
🖊ಸಂಗ್ರಹ🖋
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.




