ಬನಶಂಕರಿ ದೇವಿ ಕ್ಷೇತ್ರವು ಬಾದಾಮಿಯ ಚೊಳಗುಡ್ಡ ಎಂಬ ಊರಿನಲ್ಲಿದೆ. ಬನಶಂಕರಿ ದೇವಿಯ ಜಾತ್ರೆ ಉತ್ತರ ಕರ್ನಾಟಕದ ಬಹು ದೊಡ್ಡ ಜಾತ್ರೆ. ನೂರಾರು ವರ್ಷಗಳಿಂದ ಈ ಜಾತ್ರೆ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಜಾತ್ರೆಗೆ ನೆರೆ ರಾಜ್ಯಗಳಿಂದ ಸಾವಿರಾರು ಜನರು ಬರುತ್ತಾರೆ.
ದೇಶದಲ್ಲಿರುವ ಶಕ್ತಿ ದೇವತೆಯ ಪ್ರಮುಖ ಪೀಠಗಳಲ್ಲಿ ಬನಶಂಕರಿ ಕ್ಷೇತ್ರವೂ ಒಂದು. ಬನಶಂಕರಿ ದೇವಿ ಚಾಲುಕ್ಯ ಕುಲದೇವತೆ. ಬನಶಂಕರಿ ದೇವಾಲಯವು ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾಗಿರಬಹುದು ಎನ್ನಲಾಗಿದೆ. ಹಳೆಯ ಬನಶಂಕರಿ ದೇವಾಲಯದ ಗರ್ಭ ಗೃಹವು ಮಣ್ಣಿನಲ್ಲಿ ಹೂತು ಹೋಗಿದೆ. ಈ ಪೀಠದಲ್ಲಿ ಪರಶುರಾಮ ಅನಗಳ ಎಂಬುವವರ ಹೆಸರು ಸಹ ಇದೆ.
ಬನಶಂಕರಿದೇವಿ ಮೂರ್ತಿಸಂಪಾದಿಸಿ
ಬನಶಂಕರಿ ದೇವಿಯ ಮೂರ್ತಿ ಐದು ಅಡಿ ಎತ್ತರವಿದೆ. ಕಪ್ಪು ಶಿಲೆಯಲ್ಲಿ ಸಿಂಹ ರೂಪಿಣಿಯಾಗಿ ತಾಯಿ ಮೂಡಿದ್ದಾಳೆ. ದೇವಿಗೆ ಅಷ್ಟ ಭುಜ, ಕೈಗಳಿವೆ. ಬಲಗೈಯಲ್ಲಿ ಖಡ್ಗ, ಗಂಟೆ, ತ್ರಿಶೂಲ ಮತ್ತು ಲಿಪ್ತಿ ಹಾಗೂ ಎಡಗೈಯಲ್ಲಿ ಡಮರು, ಡಾಲು, ರುಂಡ ಮತ್ತು ಅಮೃತ ಪಾತ್ರೆಗಳಿವೆ. ಈ ದೇವಿ ತ್ರಿನೇತ್ರೆ. ಬನಶಂಕರಿಯನ್ನು ಮಹಾಕಾಳಿ, ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿ ಎಂತಲೂ ಕರೆಯುತ್ತಾರೆ. ತಾಯಿಯ ಬಲಗೈಯು ಸುಜ್ಞಾನದ ಸಂಕೇತವಾದರೆ ಎಡಗೈಯು ಶೌರ್ಯದ ಸಂಕೇತವಾಗಿದೆ. ದೇವಸ್ಥಾನದ ಶಿಖರವು ಚೌಕಕೋನಾಕಾರವಾಗಿ ಹಂತ ಹಂತವಾಗಿ ಮೇಲೆರುತ್ತಾ ಹೋಗಿದೆ. ಗೋಪುರದಲ್ಲಿ ಯಾವ ದೇವರ ವಿಗ್ರಹಗಳೂ ಇಲ್ಲ. ದೇವಾಲಯಕ್ಕೆ ನಾಲ್ಕೂ ದಿಕ್ಕಿನಲ್ಲಿ ದ್ವಾರಗಳಿವೆ. ದೇವಾಲಯದ ಆವರಣದಲ್ಲಿ ನಾಲ್ಕು ದೀಪಸ್ತಂಭಗಳಿವೆ. ಕಾರ್ತಿಕ ಮಾಸದಲ್ಲಿ ಈ ದೀಪಸ್ತಂಭಗಳಲ್ಲಿ ಭಕ್ತರು ದೀಪವನ್ನು ಬೆಳಗಿಸುತ್ತಾರೆ.
ಬದಾಮಿ ಶ್ರೀ ದೇವಿ ಬನಶಂಕರಿ, ಹಿಂದೂ ಧರ್ಮ, ಹಿಂದೂ ದೇಶದ ನಾಗರೀಕತೆಗಳು ನದಿ ತಟದಲ್ಲಿ ಬೆಳೆದು ಬಂದವುಗಳು. ನದಿ ತಟದಲ್ಲಿಯೇ ನಮ್ಮ ಧಾರ್ಮಿಕ, ವೈಜ್ಞಾನಿಕ ತಿಳುವಳಿಕೆಗಳು ಕಣ್ಣು ತೆರೆದು ಪಕ್ವವಾದವು. ಹೀಗಾಗಿ ನಮ್ಮದು ಜೀವನ ಸಂಸ್ಕೃತಿ. ಅದು ಎಂದೂ ನಿಂತು ಕೊಳಕಾಗುವ ಕೊಳವಾಗಿಲ್ಲ. ಪ್ರತಿ ಕ್ಷಣ-ಕ್ಷಣಕ್ಕೂ ಹರಿಯುತ್ತಾ, ಹೊಸ-ಹೊಸತನವನ್ನು ತುಂಬಿಕೊಳ್ಳುತ್ತಾ ನವನವೋನ್ಮೇಷಶಾಲಿಯಾಯಿತು. ಆದುದರಿಂದಲೇ ನಮ್ಮ ನೆಚ್ಚಿನ ಪುಣ್ಯಕ್ಷೇತ್ರಗಳು ನದಿ ತಟದಲ್ಲಿ ನಿರ್ಮಾಣಗೊಂಡವು.
ಹಿಮಾಲಯದ ಪಾವನ ಪ್ರವಾಹಗಳ ತಡಿಯ ನೂರಾರು ಪುಣ್ಯಕ್ಷೇತ್ರಗಳನ್ನು ಬಿಟ್ಟರೂ, ಉಳಿದ ಈ ದೇಶದಲ್ಲಿ ಮೊದಲ ಸ್ಥಾನದಲ್ಲಿ ಬರಬಲ್ಲ ಕಾಶಿ ಗಂಗೆ ಯಮುನೆಯರ ಸಂಗಮದಲ್ಲಿ, ಕತ್ತಲೆಯ ಕಾಳಿ ಮಂದಿರ ಹೂಗ್ಲಿ ನದಿ ತೀರದಲ್ಲಿ, ಅಯೋಧ್ಯ ಸರಯೂ ನದಿ ತೀರದಲ್ಲಿ, ಶೃಂಗೇರಿ ತುಂಗಾ ತೀರದಲ್ಲಿ ಹೀಗೆ ಬೆಳೆಯುತ್ತಾ ಹೋಗುವ ಯಾದಿಯು ಹೊರಗಿನವುಗಳನ್ನು ಬಿಟ್ಟರೂ, ನಮ್ಮ ಕರ್ನಾಟಕದ ಕೊಲ್ಲೂರು ಸೌಪರ್ಣಿಕಾ ತಟದಲ್ಲಿ, ಧರ್ಮಸ್ಥಳ ನೇತ್ರಾವತಿ ಸಮೀಪದಲ್ಲಿ, ಕಟೀಲು ನಂದಿನಿ ಪ್ರವಾಹದ ನಡುವೆ, ಸುಬ್ರಮಣ್ಯ ಕುಮಾರಧಾರೆಯ ತಟದಲ್ಲಿ, ಇನ್ನೂ ಉತ್ತರ ಕರ್ನಾಟಕದ ಅನೇಕ ಶಕ್ತಿ ದೇವತೆಗಳ ಕ್ಷೇತ್ರಗಳು ನದಿ ತಟದಲ್ಲಿಯೇ ಇರುವುದನ್ನು ನೋಡಬಹುದು.
ಬಾಗಲಕೋಟೆ ಜಿಲ್ಲೆ, ಬಾದಾಮಿಯಲ್ಲಿರುವ ಐತಿಹಾಸಿಕ, ಪೌರಾಣಿಕ ಕೇಂದ್ರವಾಗಿರುವ ಚಾಲುಕ್ಯರ ಆದಿಶಕ್ತಿಯಾದ ಶ್ರೀ ಬನಶಂಕರಿ ಕ್ಷೇತ್ರದಲ್ಲಿ ಪವಿತ್ರ ತೀರ್ಥಗಳ ಸಮೂಹವನ್ನೇ ನೋಡಬಹುದು. ಶ್ರೀ ದೇವಿ ಬನಶಂಕರಿ ಅನುಗ್ರಹದಿಂದ, ಬನಶಂಕರಿ ಕ್ಷೇತ್ರದಲ್ಲಿ ಉದ್ಭುವಿಸಿದ ಅನೇಕ ಪವಿತ್ರ ತಿರ್ಥಗಳ ಸ್ನಾನ-ಪಾನದಿಂದ ದೊರೆಯುವ ಫಲ ವಿಷಯವನ್ನು ವರ್ಣಿಸುವುದು ಅಸದಳವಾದುದ್ದು.
ತೀರ್ಥಗಳು ದೇಹ ಶುದ್ಧಿಗೂ, ಮನಃಶುದ್ಧಿಗೂ, ಪ್ರಸಿದ್ಧವಾದವು. ತೀರ್ಥಸ್ನಾನ ಮಾಡುವುದರಿಂದ, ಮಾನವನು ಸಕಲ ದುರಿತಗಳಿಂದ ದೂರವಾಗಿ ಇಹಪರಗಳಲ್ಲಿ ಸುಖವನ್ನು ಪಡೆಯುತ್ತಾನೆಂದು ಶಂಖ ಸ್ಮೃತಿಯಲ್ಲಿ ಹೇಳಿದೆ. ಮಾನವನನ್ನು ಉದ್ಧರಿಸುವ ಇಂತಹ ಪವಿತ್ರಮಯ ತೀರ್ಥಗಳು ಬನಶಂಕರಿ ಕ್ಷೇತ್ರದಲ್ಲಿ ಇವೆ.
ವೈಶಾಖ ಮಾಸದಲ್ಲಿ ಬರುವ ‘ಆಗಿ ಹುಣ್ಣಿಮೆ’ (ಬೌಧ ಪೌರ್ಣಿಮೆ) ದಿನದಂದು ಇಲ್ಲಿರುವ ತೀರ್ಥಗಳಲ್ಲಿ ಸ್ನಾನ ಮಾಡಿದರೆ ಪಂಚಪಾತಕಗಳು, ಮಾತಾಪಿತೃ ದ್ರೋಹವು, ವೇದನಿಂದೆ ಪಾತಕವೂ, ಪರಕನ್ಯಾ ಅಪಹರಣ ದೋಷ, ಕನ್ಯಾ ಶುಲ್ಕ ಗ್ರಹಣ ಪಾತಕ, ಇವೆಲ್ಲವೂ ನಾಶವಾಗಿ ಅಕ್ಷಯವಾದ, ಅಜರಾಮರವಾದ ಸ್ಥಾನವು ಪ್ರಾಪ್ತವಾಗುವುದು ಎಂಬ ನಂಬಿಕೆ ಈ ಧಾರ್ಮಿಕ ಕ್ಷೇತ್ರದಲ್ಲಿ ಬಂದಿದೆ.
ಈ ಕ್ಷೇತ್ರದ ಪ್ರಸಿದ್ಧ ತಿರ್ಥಗಳು:
ಮಾಲಿನಿ (ಮಲಪ್ರಭಾ ನದಿ) ತೀರ್ಥ ಸರಸ್ವತಿ (ಹಳ್ಳ) ತೀರ್ಥ ಹರಿದ್ರಾ (ದೊಡ್ಡ ಹೊಂಡ) ತೀರ್ಥ ಪದ್ಮ ತೀರ್ಥ ತೈಲ ತೀರ್ಥ ರಂಗ ತೀರ್ಥ ಅಗಸ್ತ್ಯ ತೀರ್ಥ ಅಶ್ವತ್ಥಾಮ ತೀರ್ಥ ಭಾಸ್ಕರ ತೀರ್ಥ ಕೋಟಿ ತೀರ್ಥ ವಿಷ್ಣು ಪುಷ್ಕರಣಿ ನಾಗೇಶ ತೀರ್ಥ ಇವು ಅತೀ ಮುಖ್ಯವಾದವುಗಳು. ಇವಲ್ಲದೆ ವಶಿಷ್ಟ, ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ತೀರ್ಥಗಳಿವೆ. ಈ ತಿಲಕ ವನದಲ್ಲಿ ಬಿಲ್ವ ವೃಕ್ಷಗಳು ದೊಡ್ಡವಿದ್ದು, ಅವು ಶಿವಪಾರ್ವತಿಯರ ವಿಶ್ರಾಂತಿಧಾಮ ಆಗಿರುತ್ತದೆ. ಇಲ್ಲಿರುವ ತಿರ್ಥಗಳಲ್ಲಿ ಶುದ್ಧ ಮನದಿಂದ ಸ್ನಾನ ಮಾಡಿ, ಭಕ್ತಿಯಿಂದ ಪೂಜೆ ಮಾಡಿದರೆ ನಮ್ಮ ಎಲ್ಲಾ ಪಾಪಗಳು ದೂರವಾಗಿ ಮುಕ್ತಿ ದೊರಕುವುದು.
ಬಾದಾಮಿ ಬನಶಂಕರಿ ಕ್ಷೇತ್ರವು ‘ದಕ್ಷಿಣ ಕಾಶಿ’ ಎಂದೂ ಕರೆಯಲ್ಪಡುತ್ತದೆ.
‘ಗಂಗಾಸ್ನಾನ – ತುಂಗಾಪಾನ’ ಎಂಬುದು ಗಾದೆ ಮಾತು. ಈ ಪವಿತ್ರ ಕ್ಷೇತ್ರಗಳಿಗೆ ಒಂದೊಂದು ನಂಬಿಕೆ, ಆಚರಣೆ ಇರುವುದನ್ನು ನಾವು ಕಾಣಬಹುದು.
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.




