ಒಂದು ಕಾಡಿನಲ್ಲಿ ಜಿಂಕೆ ಮತ್ತು ನವಿಲು ಇದ್ದವು, ಅವು ಸುಂದರವಾಗಿರುವುದರಿಂದ ಸದಾ ಜಂಭದಿಂದ ಮೆರೆಯುತ್ತಿದ್ದವು. ಕಾಡಿನ ಇತರ ಪ್ರಾಣಿ ಪಕ್ಷಿಗಳು ಜಿಂಕೆ ಮತ್ತು ನವಿಲನ್ನು ಕಂಡು ಪ್ರೀತಿಯಿಂದ ಮಾತನಾಡಿಸುತ್ತಿದ್ದರೆ, ಅವು ಮಾತ್ರ ದೂರ ಸರಿದು ಅವುಗಳತ್ತ ತಿರಸ್ಕಾರ ನೋಟ ಬೀರಿ ಮುಂದೆ ಸಾಗುತ್ತಿದ್ದವು, ಜಿಂಕೆ ಮತ್ತು ನವಿಲು ತಮ್ಮ ಅಂದ ಚೆಂದವನ್ನು ಮಿರಿಸುವವರೆ ಇಲ್ಲವೆಂದು ಯಾವ ಪ್ರಾಣಿ, ಪಕ್ಷಿಗಳನ್ನು ಹತ್ತಿರವೇ ಸೇರಿಸಿಕೊಳ್ಳುತ್ತಿರಲಿಲ್ಲ.
ದಿನನಿತ್ಯ ರೂಪವಿಲ್ಲದ ಖಗ, ಮೃಗಗಳನ್ನು ಕಂಡಾಗ ಜಿಂಕೆ, ನವಿಲಿಗೆ ಹೇಸಿಗೆ ಬಂದಂತಾಗತೊಡಗಿತು. ತಮ್ಮ ರೂಪವು ಅವುಗಳ ಕಣ್ಣಿಗೆ ನಾಚಿ ಎಲ್ಲಿ ಸೊರಗಿ ಹೋಗುವೆವೋ ಎಂಬ ಭಯ ಜಿಂಕೆ ಮತ್ತು ನವಿಲನ್ನು ಕಾಡತೊಡಗಿತು. ಅದಕ್ಕಾಗಿ, ತಮ್ಮ ರೂಪವನ್ನು ಬಾಡದ ಹಾಗೆ ಯಾವ ಪ್ರಾಣಿ ಪಕ್ಷಿಗಳೂ ವಾಸದ ಕಾಡಿನಲ್ಲಿ ಹೋಗಿ ಬದುಕುವುದೇ ಮೇಲು ಎಂಬ ನಿರ್ಧಾರಕ್ಕೆ ಬಂದವು. ಹಾಗೆಯೇ ಅವುಗಳ ಮನದಲ್ಲಿ ಉದ್ಭವಿಸಿದ್ದೇ ತಡ ಕ್ಷಣಮಾತ್ರದಲ್ಲಿ ತಮ್ಮ ಮೂಲ ಕಾಡನ್ನು ತೊರೆದು ಬಹುದೂರ ಹೊರಟವು.
ಹೇಗೋ ಏನೋ ಅವು ಒಂದು ಕಾಡನ್ನು ತಲುಪಿದವು. ಆದರೆ ಅಲ್ಲಿ ಬೆರಳೆಣಿಕೆಯಷ್ಟು ಪ್ರಾಣಿ ಪಕ್ಷಿಗಳು ಕಂಡುಬಂದರೂ ಒಂದೂ ಸಹ ಅಪ್ಪಿ ತಪ್ಪಿ ಜಿಂಕೆ ಮತ್ತು ನವಿಲಿಗೆ ಪ್ರೀತಿಯಿಂದ ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ಜಿಂಕೆ ಮತ್ತು ನವಿಲಿಗೂ ಸಹ ತಾವು ಜಂಭದಿಂದ ಮೆರೆಯಲು ಇದೇ ಬೇಕಾಗಿತ್ತು. ತಮ್ಮ ವಾಸಕ್ಕೂ ಇದೇ ಕಾಡು ಯೋಗ್ಯವೆಂದುಕೊಂಡವು. ಆದರೆ ಅಲ್ಲಿ ಅವು ಬಹಳ ದಿನಗಳವರೆಗೆ ಉಳಿಯಲಿಲ್ಲ. ಇದ್ದಕ್ಕಿದ್ದಂತೆ ಒಂದು ದಿನ ಅವು ಇದ್ದ ಕಾಡಿನಲ್ಲಿ ಕಾಡಿಚ್ಚು ಹಬ್ಬಿತು. ಆಕಸ್ಮಿಕ ಬೆಂಕಿಗೆ ಜಿಂಕೆ, ನವಿಲು ತಮ್ಮ ಪ್ರಾಣವನ್ನು ಅಂಗೈಯಲ್ಲಿ ಹಿಡಿದುಕೊಂಡು ದಿಕ್ಕಾಪಾಲಾದವು. ಏಕಾಏಕಿ ಸಂಭವಿಸಿದ ಕಾಡಿಚ್ಚಿನಲ್ಲಿ ಇತ್ತ ನವಿಲು ತನ್ನ ಅಂದ ಚೆಂದದ ಗರಿಗಳನ್ನೇ ಕಳೆದುಕೊಂಡರೆ, ಅತ್ತ ಜಿಂಕೆಯು ಓಡುವ ರಭಸದಲ್ಲಿ ಗಿಡ ಮರಗಳಿಗೆ ತಾಗಿ ತನ್ನ ಸುಂದರವಾದ ಕೊಂಬುಗಳನ್ನೇ ಕಳೆದುಕೊಂಡಿತು.
ಒಂದು ದಿನ ಅವರೆಡು ಸಂಧಿಸಿದವು. ತಮ್ಮ ಜಂಭಕ್ಕೆ ದೇವರು ಸರಿಯಾದ ಶಿಕ್ಷೆಯನ್ನೇ ವಿಧಿಸಿದನೆಂದು ವ್ಯಥೆಪಟ್ಟವು. ಜೀವ ಭಯದಿಂದ ಪಾರಾದರೂ ತಮ್ಮ ಸೌಂದರ್ಯ ಮಾತ್ರ ಅಪಾಯದಿಂದ ಪಾರುಮಾಡಲಿಲ್ಲವೆಂದು ನೊಂದವು. ತಮ್ಮ ಮೂಲಕಾಡಿನಲ್ಲಿ ಅತಿಯಾಗಿ ಪ್ರೀತಿಸುತ್ತಿದ್ದ ಪ್ರಾಣಿ ಪಕ್ಷಿಗಳನ್ನು ನೆನೆದುಕೊಂಡು ಒಂದೇ ಸಮನೆ ದುಖಿಸತೊಡಗಿದವು. ಅವುಗಳಿಗೆ ರೂಪವಿಲ್ಲದಿದ್ದರೆ ಗುಣವಿತ್ತು. ಆದರೆ ನಮಗೆ ರೂಪವಿದ್ದರೆ ಗುಣವಿರಲಿಲ್ಲ. “ರೂಪಕ್ಕಿಂತ ಗುಣವೇ ದೊಡ್ಡದು” ಎಂದು ಜಿಂಕೆ ಮತ್ತು ನವಿಲಿಗೆ ಈಗ ಮನದಟ್ಟಾಗಿತ್ತು. ರೂಪವನ್ನು ಕಳೆದುಕೊಂಡು ಕುರೂಪಿಯಾದ ಜಿಂಕೆ ಮತ್ತು ನವಿಲು ವಿಧಿಯಿಲ್ಲದೆ ಮೂಲ ಕಾಡನ್ನು ಆರಿಸುತ್ತಾ ವಿಷಾದದ ಹೆಜ್ಜೆಗಳನ್ನು ಹಾಕತೊಡಗಿದವು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.




