ರಾಮ ತನ್ನ ಸೋದರ ಲಕ್ಷ್ಮಣ ಮತ್ತು ವಾನರರಾಜ ಸುಗ್ರೀವನೊಂದಿಗೆ ಸೇರಿ ಲಂಕೆಯ ಮೇಲೆ ದಾಳಿ ಮಾಡುವುದಕ್ಕೆ ಸಿದ್ಧತೆ ನಡೆಸುತ್ತಿದ್ದ. ಲಂಕೆಗೆ ಸಾಗಲು ಸಮುದ್ರಕ್ಕೆ ಸೇತುವೆ ಕಟ್ಟುವ ಕಾರ್ಯ ನಡೆಯುತ್ತಿತ್ತು. ಸಾವಿರಾರು ವಾನರವೀರರು ದೊಡ್ಡ ದೊಡ್ಡ ಕಲ್ಲುಗಳನ್ನು ಹೆಕ್ಕಿ ಸಮುದ್ರಕ್ಕೆ ಎಸೆಯುತ್ತಿದ್ದರು. ಕಲ್ಲುಗಳು ಸಮುದ್ರದಲ್ಲಿ ಮುಳುಗದೇ ತೇಲಾಡುತ್ತಿದ್ದವು.
ರಾಮ ಒಂದು ಕಡೆ ಕುಳಿತು ಇವೆಲ್ಲವನ್ನೂ ನೋಡುತ್ತಾ ಚಿಂತಿಸುತ್ತಿದ್ದ. ಸ್ವಲ್ಪ ಹೊತ್ತಿನ ಬಳಿಕ ಆತನಿಗೆ ಒಂದು ಯೋಚನೆ ಬಂತು. ವಾನರ ವೀರರು ಇಷ್ಟು ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾರೆ. ನಾನು ಸುಮ್ಮನೇ ಕುಳಿತಿರುವುದು ಸರಿಯಲ್ಲ. ನಾನೂ ಅವರಿಗೆ ನೆರವಾಗಬೇಕು.
ಕೂಡಲೇ ಎದ್ದ ರಾಮ ತಾನೂ ಒಂದು ಬಂಡೆಕಲ್ಲನ್ನು ಎತ್ತಿಕೊಂಡು ಹೋಗಿ ಸಮುದ್ರಕ್ಕೆ ಎಸೆದ. ಕಲ್ಲು ತೇಲಲಿಲ್ಲ, ಮುಳುಗಿತು. ರಾಮನಿಗೆ ಅಚ್ಚರಿ. ವಾನರರು ಎಸೆದಾಗ ತೇಲುವ ಕಲ್ಲು ತಾನು ಎಸೆದರೆ ಮುಳುಗುವುದು ಯಾಕೆ? ಮತ್ತೆ ಮತ್ತೆ ಕಲ್ಲು ಹೊತ್ತು ಸಮುದ್ರಕ್ಕೆಸೆದ. ಎಲ್ಲ ಕಲ್ಲುಗಳೂ ಮುಳುಗಿದವು.
ಇದನ್ನೆಲ್ಲ ನೋಡುತ್ತಿದ್ದ ಹನುಮಂತ ನಗುತ್ತಿದ್ದ. ರಾಮ ನಾಚಿಕೆಯಿಂದ ಹನುಮಂತನ ಕಡೆಗೆ ನೋಡಿದ. ಆಗ ಹನುಮಂತ ‘ರಾಮ, ನೀನೇ ಕೈಬಿಟ್ಟರೆ, ಕಾಯುವವರು ಯಾರು?’ ಎಂದ. ಅದುವೇ ಭಕ್ತಿಯ ಶಕ್ತಿ.
🖊ಸಂಗ್ರಹ🖋
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882




