News and EventsDaily Storiesದಿನಕ್ಕೊಂದು ಕಥೆ: ವಿಶ್ವಕ್ಕೆ ವಿವೇಕ ಹಾಗೂ ಆನಂದ ನೀಡಿದ ಸಾರಥಿ ವಿವೇಕಾನಂದ

Ⓒ By, Nekarbandhu

ದಿನಕ್ಕೊಂದು ಕಥೆ: ವಿಶ್ವಕ್ಕೆ ವಿವೇಕ ಹಾಗೂ ಆನಂದ ನೀಡಿದ ಸಾರಥಿ ವಿವೇಕಾನಂದ

ಸ್ವಾಮಿ ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. ಅವರ ತಂದೆಯ ಹೆಸರು ವಿಶ್ವನಾಥ ದತ್ತ ಹಾಗೂ ತಾಯಿಯ ಹೆಸರು ಭುವನೇಶ್ವರಿದೇವಿ, ವಿಶ್ವನಾಥ ದತ್ತರು ಸುಪ್ರಸಿದ್ಧ ವಕೀಲರಾಗಿದ್ದರು. ತಮ್ಮ ಮಗನು ಕೂಡ ತಮ್ಮಂತೆ ವಕೀಲನಾಗಬೇಕು ಎಂಬುದು ಅವರ ಮಹದಾಸೆಯಾಗಿತ್ತು. ಆಗಿನ ಕಾಲದಲ್ಲಿ ಕೋಲ್ಕತ್ತಾದಲ್ಲಿ ದೊಡ್ಡ ದೊಡ್ಡ ಜಮೀನ್ದಾರರು, ಬ್ರಿಟಿಷ್ ಅಧಿಕಾರಿಗಳು ಸಾರೋಟಿನಲ್ಲಿ ಓಡಾಡುತ್ತಿದ್ದರು. ಕುದುರೆಗಳನ್ನು ಕಟ್ಟಿದ ಆ ಸಾರೋಟಿಗೆ ಒಬ್ಬ ಸಾರಥಿ ಇರುತ್ತಿದ್ದ. ಬಾಲಕ ನರೇಂದ್ರನಿಗೆ ತಾನು ದೊಡ್ಡವನಾದ ಮೇಲೆ ಸಾರೋಟಿನ ಸಾರಥಿಯಾಗಬೇಕೆಂಬ ಆಸೆಯುಂಟಾಗುತ್ತಿತ್ತು.

ಒಮ್ಮೆ ನರೇಂದ್ರನ ತಂದೆ ಅವನನ್ನು ಬಳಿಗೆ ಕರೆದು “ದೊಡ್ಡವನಾದ ಮೇಲೆ ನೀನೇನಾಗುತ್ತಿಯಾ?” ಎಂದು ಕೇಳಿದರು. ಅದಕ್ಕೆ ಏನೂ ಅರಿಯದ ನರೇಂದ್ರನಾಥನು “ದೊಡ್ಡವನಾದ ಮೇಲೆ ನಾನು ಸಾರೋಟಿನ ಸಾರಥಿಯಾಗುತ್ತೇನೆ” ಎಂದು ಹೇಳಿದನು. ಅವನ ಮಾತಿನಿಂದ ನರೇಂದ್ರನ ತಂದೆಗೆ ತುಂಬ ಕೋಪ ಬಂತು. ಅವರು ಅವನ ಕಪಾಳಕ್ಕೊಂದು ಏಟು ಕೊಟ್ಟರು. ಆಗ ಬಾಲಕ ನರೇದ್ರನು ಅಳುತ್ತ ತಾಯಿಯ ಬಳಿಗೆ ಹೋದನು, ಭುವನೇಶ್ವರಿದೇವಿ ಅವನನ್ನು ಸಮಾಧಾನಪಡಿಸಿ ದೇವರ ಕೋಣೆಗೆ ಕರೆದುಕೊಂಡು ಹೋದಳು, ದೇವರ ಕೋಣೆಯ ಗೋಡೆಯ ಮೇಲೆ ಶ್ರೀಕೃಷ್ಣನು ಅರ್ಜುನನಿಗೆ ಗೀತೋಪದೇಶ ಮಾಡುವ ಒಂದು ಪಟವಿತ್ತು. ಅದನ್ನು ಅವಳು ನರೇಂದ್ರನಿಗೆ ತೋರಿಸಿ “ಈ ಪಟದಲ್ಲಿರುವ ಶ್ರೀಕೃಷ್ಣನೂ ಕೊಡ ಸಾರಥಿಯೇ, ಆದ್ದರಿಂದ ನಿನಗೆ ಸಾರಥಿಯೇ ಆಗಬೇಕೆಂಬ ಆಸೆ ಇದ್ದರೆ ಶ್ರೀಕೃಷ್ಣನಂತಹ ಸಾರಥಿಯಾಗು” ಎಂದು ಹೇಳಿದಳು.

ಆ ಮಾತು ಬಾಲಕ ನರೇಂದ್ರನ ಮನಸ್ಸಿನ ಮೇಲೆ ತುಂಬ ಗಾಢವಾದ ಪರಿಣಾಮವನ್ನು ಉಂಟು ಮಾಡಿತು. ತಾನು ಈ ಲೋಕಕ್ಕೆಲ್ಲ ದಾರಿ ತೋರಿಸುವ ಸಾರಥಿಯಾಗಬೇಕು ಎಂದು ಅಂದೇ ಮನದಲ್ಲಿ ನಿರ್ಧರಿಸಿದ. ಮುಂದೆ ದೊಡ್ಡವನಾದ ಮೇಲೆ ವಿಶ್ವಕ್ಕೆ ವಿವೇಕ ಹಾಗೂ ಆನಂದ ಎರಡನ್ನೂ ನೀಡುವ ವಿವೇಕಾನಂದನಾದ.

ನೀತಿ :– ತಾಯಂದಿರು ತಮ್ಮ ಮಕ್ಕಳ ವ್ಯಕ್ತಿತ್ವವನ್ನು ಹೇಗೆ ರೂಪಿಸಬೇಕೆಂಬುದಕ್ಕೆ ಈ ಘಟನೆಯೊಂದು ಉತ್ತಮ ಉದಾಹರಣೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

News & Events

Bride and Grooms

Looking for Bride or Groom?

- Please Call us @ 6362030905 for any queries -